ಮಂಗಳೂರು, ಜೂನ್ 27:
ಮಂಗಳೂರಿನ ನಾಟೆಕಲ್–ತಿಪ್ಲೆ ರಸ್ತೆಯ ತಿರುವಿನಲ್ಲಿ ಇಂದು ಪಿಎ ಇಂಜಿನಿಯರಿಂಗ್ ಕಾಲೇಜಿನ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಅಪಘಾತದ ವೇಳೆ ಬಸ್ ಅಡಿಯಲ್ಲಿ ಬೈಕ್ ಸವಾರರೊಬ್ಬರು ಸಿಲುಕಿದ್ದು, ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿಯ ತಕ್ಷಣದ ಕಾರ್ಯಾಚರಣೆಯಿಂದ ಅವರನ್ನು ಸುರಕ್ಷಿತವಾಗಿ ಹೊರತೆಗೆದು ಅಪಾಯದಿಂದ ಪಾರು ಮಾಡಲಾಗಿದೆ.
ಗಾಯಗೊಂಡ ವಿದ್ಯಾರ್ಥಿಗಳಿಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ.
ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

