ಅಂತರರಾಷ್ಟ್ರೀಯ ಕನ್ನಡಿಗರ ಫೆಡರೇಷನ್ ಪೋಷಕರಾದ ರೊನಾಲ್ಡ್ ಕೊಲಸೊ ಅವರ ನೇತೃತ್ವದಲ್ಲಿ ವಿಶ್ವದಾದ್ಯಂತ ನೆಲಸಿರುವ ಅನಿವಾಸಿ ಕನ್ನಡಿಗರು ನಡೆಸಿದ ಟ್ವಿಟ್ಟರ್ (X) ಅಭಿಯಾನವು ಶುಕ್ರವಾರ ಸಂಜೆ ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಆರಂಭವಾಗಿ ಭಾರತದಲ್ಲಿ, ಗಲ್ಫ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿ ಎಲ್ಲರ ಗಮನ ಸೆಳೆದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ, ಆ ಸಚಿವಾಲಯವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ವಿಶ್ವದ ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 200ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಒಂದೇ ಧ್ವನಿಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಿದ್ದವು. ನಿರೀಕ್ಷೆಗೂ ಮೀರಿ ಸಾವಿರಾರು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಈ ಕುರಿತು ಮಾತನಾಡಿದ ರೊನಾಲ್ಡ್ ಕೊಲಸೊ, “ನಾವು ಹಲವು ದಶಕಗಳಿಂದ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಆಗ್ರಹಿಸುತ್ತಿದ್ದೇವೆ. ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಘೋಷಣೆ ಮಾಡಿರುವುದು ಸಂತೋಷದ ಸಂಗತಿ. ಇದೀಗ ಅದನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತಂದು ಅನಿವಾಸಿ ಕನ್ನಡಿಗರ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ,” ಎಂದು ಹೇಳಿದರು.
“ಇಂದಿನ ಟ್ವಿಟ್ಟರ್ ಅಭಿಯಾನದಲ್ಲಿ ಪಾಲ್ಗೊಂಡ ವಿಶ್ವದಾದ್ಯಂತ ಇರುವ ಎಲ್ಲ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅನಿವಾಸಿ ಕನ್ನಡಿಗರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಅಭಿಯಾನ ಭಾರತದಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿರುವುದು ನಮ್ಮ ಒಗ್ಗಟ್ಟು ಹಾಗೂ ನಮ್ಮ ಬೇಡಿಕೆಯ ಬಲವನ್ನು ತೋರಿಸಿದೆ. ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂಬ ವಿಶ್ವಾಸ ನಮ್ಮದಲ್ಲಿದೆ,” ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

