ದುಬೈ: ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ದುಬೈನಲ್ಲಿರುವ ಎರಡು ಅಮೆರಿಕ ಸೈನ್ಯದ “ಅಡಗು ತಾಣಗಳ” ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್, 500ಕ್ಕೂ ಹೆಚ್ಚು ಅಮೆರಿಕ ಸೇನಾ ಸಿಬ್ಬಂದಿಯನ್ನು ಹೊಂದಿದ್ದ ಈ “ಹೈಡ್-ಔಟ್ ಸ್ಥಳಗಳ” ಮೇಲೆ ನಿಖರವಾದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.

ದುಬೈನಲ್ಲಿರುವ ಆಂಬ್ಯುಲೆನ್ಸ್‌ಗಳು ಮೃತ ಮತ್ತು ಗಾಯಗೊಂಡ ಅಮೆರಿಕನ್ನರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಗಂಟೆಗಟ್ಟಲೆ ಕಾರ್ಯನಿರತವಾಗಿದ್ದವು ಎಂದು ವಕ್ತಾರರು ಹೇಳಿದ್ದಾರೆ.

ಟ್ರಂಪ್ ಮತ್ತು ಅಮೆರಿಕ ಸೈನ್ಯದ ಕಮಾಂಡರ್‌ಗಳು, ಈ ಪ್ರದೇಶವು ಅಮೆರಿಕನ್ ಸೈನಿಕರಿಗೆ ಸ್ಮಶಾನವಾಗಿ ಬದಲಾಗುತ್ತದೆ ಎಂದು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಇಸ್ಲಾಂನ ಕೆಚ್ಚೆದೆಯ ಯೋಧರ ದೈವಿಕ ಇಚ್ಛೆಗೆ ಶರಣಾಗುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲ” ಎಂದು ವಕ್ತಾರರು ಎಚ್ಚರಿಸಿದ್ದಾರೆ.

ಆದಾಗ್ಯೂ, ಯುಎಸ್ ಸೆಂಟ್ರಲ್ ಕಮಾಂಡ್, ಇರಾನ್ ದಾಳಿಯನ್ನು ತಳ್ಳಿಹಾಕಿದ್ದು, ಸತ್ಯ-ಪರಿಶೀಲಿಸಿದೆ ಮತ್ತು ದುಬೈನಲ್ಲಿ ಯಾವುದೇ ಅಮೆರಿಕದ ಸಿಬ್ಬಂದಿಯ ಮೇಲೆ ದಾಳಿ ಮಾಡಲಾಗಿಲ್ಲ ಎಂದು ಹೇಳಿದೆ.

“ಇರಾನ್ ಆಡಳಿತವು, ತಮ್ಮ ಮಿಲಿಟರಿ ಸಾಮರ್ಥ್ಯ ಕುಗ್ಗಿ ಹೋಗಿದೆ ಮತ್ತು ಕೆಳಮಟ್ಟಕ್ಕೆ ಇಳಿದಿದೆ ಎಂಬ ವಾಸ್ತವವನ್ನು ಮರೆಮಾಚಲು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳುಗಳನ್ನು ಸೃಷ್ಟಿಸುತ್ತಿದೆ” ಎಂದು ಯುಎಸ್ ಸೆಂಟ್ರಲ್ ಕಮಾಂಡ್‌ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಗಲ್ಫ್ ದೇಶಗಳಿಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ

ಏತನ್ಮಧ್ಯೆ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ-ಇಸ್ರೇಲ್ ಮೈತ್ರಿಕೂಟವನ್ನು ಬೆಂಬಲಿಸುವುದರ ವಿರುದ್ಧ ಗಲ್ಫ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಯಸಿದರೆ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ-ಇಸ್ರೇಲ್ ತಮ್ಮ ಭೂಮಿಯನ್ನು ಬಳಸಲು ಅವಕಾಶ ನೀಡಬಾರದು ಎಂದು ಪೆಜೆಶ್ಕಿಯಾನ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!
Don`t copy text! This Content is Protected