ಮೈಸೂರು: ಮುಂದಿನ ತಿಂಗಳು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಉಪ ಚುನಾವಣೆಯಲ್ಲಿ ನಮ್ಮ ಪಕ್ಷವು ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುತ್ತದೆ ಎಂದರು.

ದಾವಣಗೆರೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧದ ಬಂಡಾಯವನ್ನು ಶಮನಗೊಳಿಸಲಾಗಿದೆ, ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಸಿಎಂ ತಿಳಿಸಿದರು.

ಮಾರ್ಚ್ 30 ಮತ್ತು 31 ರಂದು ಬಾಗಲಕೋಟೆಯಲ್ಲಿ ಮತ್ತು ಏಪ್ರಿಲ್ 1 ಹಾಗೂ 2 ರಂದು ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಸಿದ್ದರಾಮಯ್ಯ ಹೇಳಿದರು.

ಉಪಚುನಾವಣೆ ಫಲಿತಾಂಶಕ್ಕೂ ಸಿಎಂ ಕುರ್ಚಿಗೂ ಸಂಬಂಧ ಇಲ್ಲ

ಉಪಚುನಾವಣೆ ಫಲಿತಾಂಶಕ್ಕೂ ಮತ್ತು ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಎರಡಕ್ಕೂ ಲಿಂಕ್ ಮಾಡಬೇಡಿ. ಹೈಕಮಾಂಡ್ ಒಪ್ಪಿದರೆ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಸಿಎಂ ಹೇಳಿದರು.

ಪಕ್ಷವು “ಖಂಡಿತವಾಗಿಯೂ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ” ಮತ್ತು 2028ರ ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ಅಧಿಕಾರ ಉಳಿಸಿಕೊಳ್ಳುತ್ತದೆ ಎಂದು ಹೇಳಿದರು.

ಉಪಚುನಾವಣೆ ಫಲಿತಾಂಶವು ಜನ ಸರ್ಕಾರಕ್ಕೆ ಮಾಡುವ ಆರ್ಶೀವಾದ ಆಗಲಿದೆ. ಯಾವುದೇ ಚುನಾವಣೆ ನಡೆದರೂ ನಾವೇ ಗೆಲ್ಲುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!
Don`t copy text! This Content is Protected