ವಾಷಿಂಗ್ಟನ್: ಮಧ್ಯ ಪ್ರಾಚ್ಯ ಸಂಘರ್ಷ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಲೇ ಇದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆ ಹಾಗೂ ಬೆದರಿಕೆಗಳಿಗೆ ಬಗ್ಗದ ಇರಾನ್ ಮತ್ತೆ ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಶುಕ್ರವಾರ ಭಯಾನಕ ದಾಳಿ ನಡೆಸಿದೆ.

6 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಡ್ರೋನ್‌ಗಳನ್ನು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಉಡಾಯಿಸಿದ್ದು, ಪರಿಣಾಮ ಕನಿಷ್ಠ 15 ಮಂದಿ ಅಮೆರಿಕಾದ ಸೈನಿಕರು ಗಾಯಗೊಂಡಿದ್ದಾರೆ. ಅವರಲ್ಲಿ 5 ಜನರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಈ ವಾಯುನೆಲೆ ಸೌದಿ ರಾಜಧಾನಿ ರಿಯಾದ್ನಿಂದ 96 ಕಿಲೋಮೀಟರ್ ದೂರದಲ್ಲಿದ್ದು, ಇದು ರಾಯಲ್ ಸೌದಿ ಏರ್ ಫೋರ್ಸ್ ನಡೆಸುವ ವಾಯುನೆಲೆಯಾಗಿದೆ. ಆದರೆ, ಯುದ್ಧ ಹಿನ್ನೆಲೆಯಲ್ಲಿ ಅಮೆರಿಕಾದ ಸೈನಿಕರು ಸಹ ಇಲ್ಲಿ ನಿಯೋಜಿತರಾಗಿದ್ದಾರೆ.

ಇಸ್ರೇಲ್-ಅಮೆರಿಕಾ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾದಾಗಿನಿಂದರೂ ಈ ಪ್ರದೇಶವನ್ನು ಹಲವು ಬಾರಿ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ.

ಈ ದಾಳಿಗೂ ಮುನ್ನ ಇದೇ ನೆಲೆ ಮೇಲೆ ಈ ವಾರದಲ್ಲಿ ಎರಡು ದಾಳಿಗಳು ನಡೆದಿವೆ. ಮೊದಲ ದಾಳಿಯಲ್ಲಿ 14 ಅಮೇರಿಕನ್ ಸೈನಿಕರು ಗಾಯಗೊಂಡಿದ್ದರು. ಎರಡನೇ ದಾಳಿಯಲ್ಲಿ ಯಾವುದೇ ಗಾಯ ಸಂಭವಿಸಿಲ್ಲ ಆದರೆ ಅಮೇರಿಕಾದ ವಿಮಾನ ಹಾನಿಗೀಡಾಯಿತು.

ಮಾರ್ಚ್ 1 ರಂದು ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಅಮೇರಿಕನ್ ಸರ್ಜೆಂಟ್ ಬೆಂಜಮಿನ್ ಎನ್. ಪೆನಿಂಗ್ಟನ್ ಗಾಯಗೊಂಡು ಕೆಲ ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ನಡುವೆ ಯುದ್ಧದಲ್ಲಿ ಈ ವರೆಗೂ ಅಮೆರಿಕಾದ 300ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದು, 13 ಯೋಧರು ಹುತಾತ್ಮರಾಗಿದ್ದಾರೆ.

ದಾಳಿ ಬೆನ್ನಲ್ಲೇ ಹೆಚ್ಚಿನ ಅಮೇರಿಕನ್ ಪಡೆಗಳು ಮಧ್ಯಪ್ರಾಚ್ಯವನ್ನು ತಲುಪುತ್ತಿದ್ದು, ಸುಮಾರು 2,500 ಮೆರೀನ್‌ಗಳನ್ನು ಹೊತ್ತ ನೌಕಾಪಡೆಯ ಹಡಗು ಈಗ ಈ ಪ್ರದೇಶಕ್ಕೆ ಆಗಮಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಶನಿವಾರ ಪ್ರಕಟಿಸಿದೆ.

ಈ ನಡುವೆ ಸಂಘರ್ಷದಿಂದ ಜಾಗತಿಕ ವಿಮಾನ ಸಂಚಾರ, ತೈಲ ರಫ್ತುಗಳು ಮತ್ತು ಇಂಧನ ಬೆಲೆಗಳಲ್ಲಿ ತೀವ್ರ ಪರಿಣಾಮ ಕಂಡುಬರುತ್ತಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿಯಂತ್ರಿಸುತ್ತಿರುವುದರಿಂದ ವಿಶ್ವ ಆರ್ಥಿಕತೆಗೆ ಅಸ್ತವ್ಯಸ್ತತೆ ಉಂಟಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಜಲಸಂಧಿಯನ್ನು ಏಪ್ರಿಲ್ 6 ರೊಳಗೆ ತೆರೆಯಲು ಇರಾನ್‌ಗೆ ಸೂಚನೆ ನೀಡಿದ್ದರೂ, ಇರಾನ್ ಯಾವುದಕ್ಕೂ ತಲೆಬಾಗದೆ, ಯುದ್ಧವನ್ನು ಮುಂದುವರೆಸುತ್ತಿದೆ.

ಒಂದೆಡೆ ಅಮೇರಿಕಾದಲ್ಲಿ ಕೆಲ ರಾಜಕಾರಣಿಗಳು ಯುದ್ಧವನ್ನು ಸ್ಥಗಿತಗೊಳಿಸುವಂತ ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ಅಮೆರಿಕಾ ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ ಅಮೆರಿಕ ತನ್ನ ಗುರಿಗಳನ್ನು “ಭೂಸೇನೆ ಇಲ್ಲದೆ ಕೂಡ ಸಾಧಿಸಬಹುದು. ಆದರೆ, ಅವಶ್ಯಕವಾದರೆ, ಅಮೆರಿಕ ಅಧ್ಯಕ್ಷ ಟ್ರಂಪ್‌ಗಾಗಿ ಎಲ್ಲಾ ರೀತಿಯಲ್ಲೂ ತ್ವರಿತವಾಗಿ ಪ್ರತಿಕ್ರಿಯಿಸಲು ಸೇನೆ ಸಿದ್ಧವಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!
Don`t copy text! This Content is Protected