ಅರಿಕ್ಕಾಡಿಯಲ್ಲಿ ಹೊಸ ಟೋಲ್ ಗೇಟ್ ಸ್ಥಾಪನೆಯಾದ ಬಳಿಕ, ಕೇವಲ 22 ಕಿಲೋಮೀಟರ್ ಅಂತರದಲ್ಲೇ ತಲಪಾಡಿಯಲ್ಲಿ ಮತ್ತೊಂದು ಟೋಲ್ ಗೇಟ್ ಮೂಲಕ ವಸೂಲಿ ಮುಂದುವರಿಯುತ್ತಿರುವುದು ಕರ್ನಾಟಕ–ಕೇರಳ ಗಡಿಭಾಗದ ಜನತೆಗೆ ತೀವ್ರ ಆರ್ಥಿಕ ಹೊರೆ ತಂದಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ನಿಯಮಗಳ ಪ್ರಕಾರ ಸಾಮಾನ್ಯವಾಗಿ ಎರಡು ಟೋಲ್ ಗೇಟ್‌ಗಳ ನಡುವೆ ಕನಿಷ್ಠ 60 ಕಿಲೋಮೀಟರ್ ಅಂತರ ಇರಬೇಕೆಂಬ ಮಾರ್ಗಸೂಚಿ ಇದ್ದರೂ, ಈ ನಿಯಮದ ಆತ್ಮಕ್ಕೆ ವಿರುದ್ಧವಾಗಿ ಒಂದೇ ಮಾರ್ಗದಲ್ಲಿ ಎರಡು ಬಾರಿ ಟೋಲ್ ವಸೂಲಿ ನಡೆಯುತ್ತಿರುವುದು ಸ್ಪಷ್ಟವಾಗಿ ಜನವಿರೋಧಿ ಕ್ರಮವಾಗಿದೆ.

ತಲಪಾಡಿ–ಅರಿಕ್ಕಾಡಿ ಮಾರ್ಗವು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ನಡುವಿನ ಪ್ರಮುಖ ಸಂಚಾರ ಮಾರ್ಗವಾಗಿದ್ದು, ದಿನನಿತ್ಯ ಸಾವಿರಾರು ಕಾರ್ಮಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳು ಈ ರಸ್ತೆ ಅವಲಂಬಿಸಿದ್ದಾರೆ. ಅಲ್ಪ ಅಂತರದಲ್ಲೇ ಎರಡು ಬಾರಿ ಟೋಲ್ ಪಾವತಿಸಬೇಕಾಗಿರುವುದು ಜನಸಾಮಾನ್ಯರಲ್ಲಿ ಅಸಮಾಧಾನ ಮತ್ತು ಆಕ್ರೋಶ ಉಂಟುಮಾಡಿದೆ.
ಈ ಜನವಿರೋಧಿ ಟೋಲ್ ವ್ಯವಸ್ಥೆ ವಿರೋಧಿಸಿ ಕೇರಳ ರಾಜ್ಯದ ಮಂಜೇಶ್ವರ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎ.ಕೆ. ಅಶ್ರಫ್ ಅವರು ಧೈರ್ಯವಾಗಿ ಹೋರಾಟಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ. ಗಡಿಭಾಗದ ಜನರ ಧ್ವನಿಯಾಗಿ ಅವರು ಈ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದು, ಇದು ಕೇವಲ ಕೇರಳದ ಸಮಸ್ಯೆಯಲ್ಲ; ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನೂ ನೇರವಾಗಿ ತಟ್ಟುವ ವಿಷಯವಾಗಿದೆ.

ಹೊಸ ಟೋಲ್ ಗೇಟ್ ಸ್ಥಾಪನೆ ಹಳೆಯ ಟೋಲ್ ಗೇಟ್ ಸ್ಥಳಾಂತರದ ಭಾಗವಾಗಿದ್ದರೆ, ತಲಪಾಡಿಯ ಹಳೆಯ ಟೋಲ್ ಗೇಟ್ ಅನ್ನು ತಕ್ಷಣವೇ ತೆರವುಗೊಳಿಸಬೇಕು. ಆದರೆ ಯಾವುದೇ ಸ್ಪಷ್ಟನೆ ಇಲ್ಲದೆ, ಯಾವುದೇ ವಿನಾಯಿತಿ ದಾಖಲೆಗಳನ್ನು ಸಾರ್ವಜನಿಕಗೊಳಿಸದೇ, ಎರಡೂ ಟೋಲ್ ಗೇಟ್‌ಗಳ ಮೂಲಕ ವಸೂಲಿ ಮುಂದುವರಿಸಿರುವುದು ಜನತೆಯ ನಂಬಿಕೆಗೆ ಧಕ್ಕೆ ತಂದಿದೆ.
ಈ ಹಿನ್ನೆಲೆಯಲ್ಲಿ, ಮಾನ್ಯ ವಿಧಾನಸಭಾಧ್ಯಕ್ಷರೂ ಆಗಿರುವ ಉಡುಪಿ–ಮಂಗಳೂರು ಕ್ಷೇತ್ರದ ಶಾಸಕರಾದ ಶ್ರೀ ಯು.ಟಿ. ಪರೀದ್ ಖಾದರ್ ಅವರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ಬ್ರಿಜೇಶ್ ಚೌಟ ಅವರು ಕೂಡ ಈ ವಿಷಯದಲ್ಲಿ ತಕ್ಷಣ ಸ್ಪಷ್ಟ ನಿಲುವು ತಾಳಬೇಕು. ಗಡಿಭಾಗದ ಜನರ ಸಂಕಷ್ಟವನ್ನು ಮನಗಂಡು, ಅವರು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಈ ವಿಚಾರವನ್ನು ಬಲವಾಗಿ ಎತ್ತಿ ಹಿಡಿದು, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಜನಪರ ನಿರ್ಧಾರಕ್ಕೆ ಒತ್ತಾಯಿಸಬೇಕಾಗಿದೆ.
ಇದು ರಾಜ್ಯಗಳ ನಡುವಿನ ರಾಜಕೀಯ ವಿಷಯವಲ್ಲ; ಇದು ಸಾಮಾನ್ಯ ಜನರ ಬದುಕಿನ ಸಮಸ್ಯೆ. ಆದ್ದರಿಂದ, ಎ.ಕೆ. ಅಶ್ರಫ್ ಅವರ ನ್ಯಾಯಯುತ ಹೋರಾಟಕ್ಕೆ ಕರ್ನಾಟಕದ ಜನತೆ, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಬೆಂಬಲ ನೀಡುವ ಮೂಲಕ, ಒಂದೇ ಮಾರ್ಗದಲ್ಲಿ ಎರಡು ಟೋಲ್ ವಸೂಲಿಗೆ ಅಂತ್ಯ ಹಾಡಲು ಒಗ್ಗಟ್ಟಾಗಿ ಮುಂದಾಗಬೇಕಾಗಿದೆ.
