ಬಂಟ್ವಾಳ: ಮುಂಬರುವ 2028ರ ಬಂಟ್ವಾಳ ವಿಧಾನಸಭಾ ಚುನಾವಣೆಯಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಿಸುವಂತೆ ಹಾಗೂ ಅವರ ಹೆಸರನ್ನು ಮಾಜಿ ಸಚಿವರು ಸ್ವತಃ ಸೂಚಿಸಬೇಕು ಎಂಬ ಮನವಿ ಅಲ್ಪಸಂಖ್ಯಾತ ಸಮುದಾಯದ ವಲಯದಲ್ಲಿ ಕೇಳಿಬರುತ್ತಿದೆ.
ಈ ಹಿಂದಿನ ವಿಟ್ಲ ವಿಧಾನಸಭಾ ಕ್ಷೇತ್ರ ಅಸ್ತಿತ್ವದಲ್ಲಿದ್ದ ಸಮಯದಲ್ಲಿಯೇ ಎಂ.ಎಸ್. ಮಹಮ್ಮದ್ ಅವರು ಕಾಂಗ್ರೆಸ್ ಪಕ್ಷದ ಬಲಿಷ್ಠ ಅಭ್ಯರ್ಥಿಯಾಗಿ ಪರಿಗಣಿಸಲ್ಪಟ್ಟಿದ್ದರು. ಆದರೆ ನಂತರ ನಡೆದ ಕ್ಷೇತ್ರ ಪುನರ್ವಿಂಗಡನೆಯಿಂದ ವಿಟ್ಲ ಕ್ಷೇತ್ರ ಬಂಟ್ವಾಳಕ್ಕೆ ವಿಲೀನಗೊಂಡ ಹಿನ್ನೆಲೆಯಲ್ಲಿ ಆ ಅವಕಾಶ ಕೈ ತಪ್ಪಿದಂತಾಯಿತು ಎಂದು ಕಾರ್ಯಕರ್ತರು ಸ್ಮರಿಸುತ್ತಿದ್ದಾರೆ.
ಅದಾದ ಬಳಿಕ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಎಂ.ಎಸ್. ಮಹಮ್ಮದ್ ಅವರು ಹಗಲು-ರಾತ್ರಿ ಎನ್ನದೆ ದುಡಿದು, ಮಾಜಿ ಸಚಿವರ ಗೆಲುವಿಗೆ ಮಹತ್ತರ ಪಾತ್ರವಹಿಸಿದ್ದಾರೆ. ತಮ್ಮ ರಾಜಕೀಯ ಜೀವನದ ಬಹುಭಾಗವನ್ನು ಪಕ್ಷದ ಸಂಘಟನೆ ಮತ್ತು ಗೆಲುವಿಗಾಗಿ ಅರ್ಪಿಸಿದ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.
ಇದಕ್ಕೂ ನಡುವೆಯೇ ರಾಜಕೀಯ ವಲಯದಲ್ಲಿ ಕೆಲವು ಮಂದಿ ಅವರನ್ನು ಹಾಸ್ಯವಾಡಿದ ಸಂದರ್ಭಗಳೂ ಉಂಟು. “ಮಹಮ್ಮದ್ ರೇ, ಈರ್ ಆರೆನ್ ಪುಗರಿಯೇರಾ ಮಾತ್ರ ಇಪ್ಪುನ್ನಾ” (ನೀವು ಬರೀ ಹೊಗಳಲು ಮಾತ್ರ ಇರುವವರಾ?) ಎಂದು ಕುಹುಕವಾಗಿ ಮಾತನಾಡಿದವರೂ ಇದ್ದಾರೆ ಎಂಬುದನ್ನು ಕಾರ್ಯಕರ್ತರು ನೆನಪಿಸಿಕೊಳ್ಳುತ್ತಾರೆ.
ಆದರೆ ಇಂತಹ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ, ಎಂ.ಎಸ್. ಮಹಮ್ಮದ್ ಅವರು ಸಮಾಜ ಸೇವೆಯ ದಾರಿಯನ್ನೇ ಆಯ್ದುಕೊಂಡಿದ್ದಾರೆ. ಸಮುದಾಯದ ಕಷ್ಟ–ಸುಖಗಳಲ್ಲಿ ಅರ್ಧರಾತ್ರಿಯಾದರೂ ಧಾವಿಸಿ ಸಹಾಯಕ್ಕೆ ನಿಲ್ಲುವ ಅವರ ಚಾಕಚಕ್ಯತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹಲವರು ಪ್ರಶಂಸಿಸುತ್ತಾರೆ.
ರಾಜಕೀಯ ಜೀವನದಲ್ಲಿ ಹಣ ಮತ್ತು ಹುದ್ದೆಗಳ ಹಿಂದೆ ಓಡದೆ, ಸರಳತೆಯೊಂದಿಗೆ ಪಕ್ಷದ ಕೆಲಸಕ್ಕೆ ತೊಡಗಿಸಿಕೊಂಡಿರುವ ನಾಯಕರು ವಿರಳವಾಗುತ್ತಿರುವ ಈ ಕಾಲದಲ್ಲಿ ಎಂ.ಎಸ್. ಮಹಮ್ಮದ್ ಅವರಂತಹ ನಿಷ್ಠಾವಂತ ಕಾರ್ಯಕರ್ತರು ಪಕ್ಷಕ್ಕೆ ಅಮೂಲ್ಯ ಆಸ್ತಿಯಾಗಿದ್ದಾರೆ ಎಂದು ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.
ವಿಶೇಷವಾಗಿ ಒಂದು ಸಮುದಾಯ ಯಾವುದೇ ಷರತ್ತುಗಳಿಲ್ಲದೆ ಹಲವು ವರ್ಷಗಳಿಂದ ಮಾಜಿ ಸಚಿವರನ್ನು ಸದಾ ಬೆಂಬಲಿಸುತ್ತಾ ಬಂದಿದೆ. ಆ ನಂಬಿಕೆಗೆ ಗೌರವ ನೀಡುವ ಸಮಯ ಇದೀಗ ಬಂದಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಸಚಿವರು ಸ್ವತಃ ಮುಂದಾಗಿ 2028ರ ಬಂಟ್ವಾಳ ವಿಧಾನಸಭಾ ಚುನಾವಣೆಗೆ ಎಂ.ಎಸ್. ಮಹಮ್ಮದ್ ಅವರ ಹೆಸರನ್ನು ಅಭ್ಯರ್ಥಿಯಾಗಿ ಸೂಚಿಸಿದರೆ, ಅದು ಸಮುದಾಯದ ವಿಶ್ವಾಸಕ್ಕೆ ತಕ್ಕ ಗೌರವ ನೀಡಿದಂತಾಗುತ್ತದೆ ಹಾಗೂ ಅವರ ಬೆಂಬಲದ ಋಣ ತೀರಿಸಿದಂತಾಗುತ್ತದೆ ಎಂದು ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಸಮಾನ ಮನಸ್ಕದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
