ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ರಾಷ್ಟ್ರೀಯ ಉಪಾಧ್ಯಕ್ಷೆ ರೈಹಾನತ್ ಕೇರಳ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಸಭೆಯ ಉದ್ಘಾಟನೆಯನ್ನು ಮಾಡುತ್ತಾ ಚುನಾವಣಾ ಆಯೋಗವು ದೇಶಾದ್ಯಂತ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯನ್ನು ನಡೆಸಲು ಮುಂದಾಗಿದೆ. ಜನಪ್ರತಿನಿಧಿ ಕಾಯ್ದೆ 1950 ಸೆಕ್ಷನ್ 21 ರ ಪ್ರಕಾರ ಮತದಾರರ ಪಟ್ಟಿ ಪರಿಷ್ಕರಣೆ ( SIR) ಸಮ್ಮತಾರ್ಹವೂ ಆಗಿದೆ.
ಮತದಾನಕ್ಕೆ ಅರ್ಹವಾದ ದಾಖಲೆಗಳನ್ನು ನೀಡಿದರೂ ಅವುಗಳನ್ನು ಅನರ್ಹ ಗೊಳಿಸಿದ ಕಾರಣ, 65 ಲಕ್ಷ ಬಡ ಅಲ್ಪಸಂಖ್ಯಾತ , ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ.
ದೇಶದ ಜನತೆಯ ನಂಬಿಕೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿರುವ ಚುನಾವಣಾ ಆಯೋಗ ಇದೀಗ
ನಡೆಸಲು ಮುಂದಾಗಿರುವ ಎಸ್ಐಆರ್ ಯೋಜನೆ ಕೂಡಾ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತಿದ್ದು , ಪಕ್ಷಪಾತ ಧೋರಣೆಯು ಸಕ್ರಿಯವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ನಿರ್ದಿಷ್ಟ ವರ್ಗಗಳ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ.
ಹಾಗಾಗಿ ಈ ಎಸ್ ಐ ಆರ್ ಪ್ರಕ್ರಿಯೆಯ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು..
ಈ ಸಭೆಯಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ, ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1)ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಪತ್ತೆ; ಕರಾಳ ಆಡಳಿತದ ನಿದರ್ಶನ
ಮುಖ್ಯಮಂತ್ರಿಗಳ ತವರು ಜಿಲ್ಲೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೆಲಸಕ್ಕಾಗಿ ಬಂದ ಯುವತಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣವು ಮಾಸಿ ಹೋಗುತ್ತಿದ್ದಂತೆ, ಇದೀಗ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯ ದಂಧೆಯು ನಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೆಲ ತಿಂಗಳ ಹಿಂದೆ ಮಂಡ್ಯ ದಲ್ಲೂ ಇಂತಹದ್ದೇ ಅಪರಾಧಿಕ ಕ್ರತ್ಯವು ದಾಖಲಾಗಿದ್ದು, ಅದರ ವಿರುದ್ಧ ಗಂಭೀರವಾದ , ಅತ್ಯಂತ ಕಠಿಣವಾದ ಕಾನೂನು ಕ್ರಮಗಳು ಜಾರಿಯಾಗಿದ್ದರೆ ಇಂದು ಮತ್ತೆ ಈ ಕರಾಳ ದಂಧೆಯು ತಲೆ ಎತ್ತಲು ಸಾಧ್ಯವಾಗುತ್ತಿರಲಿಲ್ಲ.
ಅಸಮರ್ಪಕವಾದ, ಸೂಕ್ತವಾಗಿ ಜಾರಿಯಾಗದ ಕಾನೂನುಗಳಿಂದ ಹೆಣ್ಣಿನ ಅಸ್ತಿತ್ವನನ್ನೇ ಇಲ್ಲವಾಗಿಸುವ , ಆಕೆಯ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಇಂತಹ ಕಾನೂನು ಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ಮುಂದುವರಿಯುತ್ತಿದೆ. ಹೆಣ್ಣು ಮಕ್ಕಳ ವಿರುದ್ಧ ನಡೆಯುತ್ತಿರುವ ಈ ಶೋಷಣೆಯ ಮಟ್ಟವು ರಾಜ್ಯದಲ್ಲಿ ಕರಾಳ ಆಡಳಿತದ ನಿದರ್ಶನವಾಗಿದೆ. ಮಹಿಳಾ ಪರ ಯೋಜನೆಗಳನ್ನು ಘೋಷಿಸುತ್ತಿರುವ , ಜಾರಿಗೊಳಿಸುತ್ತಿರುವ ಸರ್ಕಾರವು ಮೊತ್ತ ಮೊದಲನೆಯದಾಗಿ ಆಕೆಯ ಅಸ್ತಿತ್ವಕ್ಕೆ ಮಾರಕವಾಗುತ್ತಿರುವ ಇಂತಹ ದಂಧೆಗಳಿಗೆ ಕಡಿವಾಣ ಹಾಕಬೇಕೆಂದು ಸಭೆಯು ಒತ್ತಾಯಿಸುತ್ತದೆ.
2)ಪೋಲೀಸ್ ವಿಚಾರಣೆಯ ಸಂದರ್ಭದಲ್ಲಿ ಮಹಿಳೆಯ ಗೌರವಕ್ಕೆ ಆದ್ಯತೆ: ವಿಮ್ ಶ್ಲಾಘನೆ
ಮಹಿಳೆಯರ ವಿಚಾರಣೆಯ ವಿಚಾರದಲ್ಲಿ ನೂತನ ಡಿಜಿಪಿ ಯವರು ಹೊರಡಿಸಿದ ಸುತ್ತೋಲೆಯು , ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಹಾಗೂ
ಇದು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮಾನವೀಯ ಕಳಕಳಿಯನ್ನು ಪ್ರತಿಬಿಂಬಿಸುತಿದೆ.
ಈ ಮಾರ್ಗಸೂಚಿಯು ಯತಾವತ್ತಾಗಿ ಕಾರ್ಯರೂಪಕ್ಕೆ
ಬಂದು, ಪ್ರತಿಯೊಬ್ಬ ಪೋಲೀಸ್ ಅಧಿಕಾರಿಯೂ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಪಾರದರ್ಶಕವಾಗಿ ಕ್ರಮ ವಹಿಸಬೇಕು ಹಾಗೂ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶ ಕಲ್ಪಿಸದಂತೆ ನ್ಯಾಯಯುತವಾಗಿ ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತಂದು ಮಹಿಳೆಯರ ಗೌರವವನ್ನು ಕಾಪಾಡಿಕೊಳ್ಳಬೇಕೆಂದು ಸಭೆಯು ಒತ್ತಾಯಿಸುತ್ತದೆ. ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷೆ ಶಾಝಿಯ ಬೆಂಗಳೂರು, ಕಾರ್ಯದರ್ಶಿಗಳಾದ ಝುಲೈಖ ಬಜ್ಪೆ ಹಾಗೂ ಸಾನಿಯಾ ಮೈಸೂರ್, ಶಾಹಿದಾ ತಸ್ನೀಮ್ , ರಮ್ಲತ್, ನಾಝಿಯ ಕಾಪು, ಜಬೀನ್ ಮೈಸೂರು,ಹಾಜರಿದ್ದರು.. ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆಯವರು ಸ್ವಾಗತಿಸಿ ವರದಿಯನ್ನು ವಾಚಿಸಿದರು ಹಾಗೂ ರಾಜ್ಯ ಕಾರ್ಯದರ್ಶಿ ಝುಲೈಖರವರು ಧನ್ಯವಾದವಿತ್ತರು.














